ಬೆಂಗಳೂರು, ಆ. 22: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಪರ-ವಿರೋಧದ ಚರ್ಚೆ ಆಗುತ್ತಿರುವ ಸಂದರ್ಭದಲ್ಲಿಯೇ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಜನತೆಗೆ ಮತ್ತೊಂದು ದೊಡ್ಡ ಶಾಕ್ ಕೊಟ್ಟಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟಿದ್ದ ಆಶ್ವಾಸನೆಯಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನೇನೋ ಜಾರಿಗೆ ತಂದಿದೆ. ಆದರೆ ಗ್ಯಾರಂಟಿ ಯೋಜನೆಗಳಿಂದ ಜನಸಾಮಾನ್ಯರ ಮೇಲೆ ಹೊರೆ ಹೆಚ್ಚಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿವೆ. ಈ ಮಧ್ಯೆ ಮತ್ತೊಂದು ಹೊರೆಯನ್ನು ಹಾಕಲು ರಾಜ್ಯ ಸರ್ಕಾರ ಮುಂದಾಗಿರುವುದಕ್ಕೆ ಬೆಂಗಳೂರಿನ ಜನತೆ ಕಂಗಾಲಾಗಿದ್ದಾರೆ.
ಹೌದು, ಬಿಡಬ್ಲ್ಯೂಎಸ್ಎಸ್ಬಿ ಅಂದರೆ ‘ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ’ಯು ಬೆಂಗಳೂರಿಗೆ ಸರಬರಾಜು ಮಾಡುವ ಕಾವೇರಿ ನೀರಿನ ಬಿಲ್ ಹೆಚ್ಚಿಗೆ ಮಾಡಲು ತೀರ್ಮಾನಿಸಿದೆ. ಈ ವಿಷಯವನ್ನು ಸ್ಪಷ್ಟಪಡಿಸಿರುವ ಡಿಸಿಎಂ ಡಿಕೆ ಶಿವಕುಮಾರ್, “ಯಾರು ಏನೇ ಆಕ್ಷೇಪ ವ್ಯಕ್ತಪಡಿಸಿದರೂ ನೀರಿನ ದರ ಏರಿಕೆ ಮಾಡುತ್ತೇವೆ, ಏರಿಕೆ ಮಾಡುವುದು ನಮಗೆ ಅನಿವಾರ್ಯವಾಗಿದೆ. ಬೆಂಗಳೂರಿನಲ್ಲಿ ಕಳೆದ 12-13 ವರ್ಷಗಳಿಂದ ನೀರಿನ ದರವನ್ನು ಹೆಚ್ಚಿಸಿಲ್ಲ. ಆದರೂ ಕೂಡ ಬಿಡಬ್ಲ್ಯೂಎಸ್ಎಸ್ಬಿ ಕಷ್ಟಪಟ್ಟು ನಿರ್ಹಹಣೆ ಮಾಡುತ್ತಿದೆ” ಎಂದಿದ್ದಾರೆ. ಆ ಮೂಲಕ ಆಯ್ದ ವರ್ಗಗಳಿಗೆ ನೀರಿನ ದರ ಹೆಚ್ಚಿಲಾಗುವುದು ಎಂದು ಪರೋಕ್ಷವಾಗಿ ವಿಧಾನಸೌಧದಲ್ಲಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ‘ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ, 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ’ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಡಿಕೆ ಶಿವಕುಮಾರ್ ಅವರು ಯಾರಿಗೆ ಕಾವೇರಿ ನೀರಿನ ದರದಲ್ಲಿ ಏರಿಕೆ ಆಗುತ್ತದೆ ಎಂಬುದರ ಬಗ್ಗೆ ತಿಳಿಸಿದ್ದಾರೆ. “ಬೆಂಗಳೂರಿನಲ್ಲಿರುವ 1.4 ಕೋಟಿ ಜನರಿಗೆ ನೀರು ಕೊಡಬೇಕು. ಇದಕ್ಕಾಗಿ ಸಾಲ ಮಾಡಿ, ಸಂಪರ್ಕ ಒದಗಿಸುವುದಕಕ್ಕೆ ದರ ಏರಿಕೆ ಮಾಡದೆ ನೀರು ಕೊಡಲು ಕಷ್ಟವಾಗುತ್ತದೆ. ದರ ಹೆಚ್ಚಳ ಮಾಡದಿದ್ದರೇ ಬಿಡಬ್ಲ್ಯೂಎಸ್ಎಸ್ಬಿ ಉಳಿಯುವುದಿಲ್ಲ, ಜಲಮಂಡಳಿಯ ನೌಕರರು ಬದುಕಲೂ ಆಗುವುದಿಲ್ಲ. ಮಂಡಳಿಯ ವಿದ್ಯುತ್ ಬಿಲ್ ಕಟ್ಟಲೂ ಈಗ ಆಗುತ್ತಿಲ್ಲ. ಎಲ್ಲರಿಗೂ ನೀರಿನ ದರ ಹೆಚ್ಚಳ ಮಾಡುವುದಿಲ್ಲ ಎನ್ನುವ ಮೂಲಕ ಯಾರಿಗೆ ನೀರಿನ ದರ ಏರಿಕೆ ಆಗಲಿದೆ ಎಂಬುದನ್ನು ಸದಪಷ್ಟಪಡಿಸಿಲ್ಲ. ಜೊತೆಗೆ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗದ ಜನರ ಮೇಲೆ ನೀರಿನ ಹೊರೆ ಹೆಚ್ಚಾಗುವ ಆತಂಕ ಕಾಡುವಂತೆ ಪರೋಕ್ಷವಾಗಿ ಮಾತನಾಡಿದ್ದಾರೆ. ಜೊತೆಗೆ ಯಾರೇ ಧರಣಿ ಮಾಡಲಿ ದರ ಏರಿಕೆಯಲ್ಲಿ ನನ್ನ ನಿರ್ಧಾರ ಬದಲಾಗದು ಎಂದು ಎಂದು ಖಡಕ್ ಆಗಿ ತಿಳಿಸಿದ್ದಾರೆ.
ನಿಮಗೆ ತಲೆ ಕೆಟ್ಟಿದೆಯಾ ಎಂದು ಆಡಿಕೊಂಡಿದ್ದರು!
“ಕಳೆದ 14 ವರ್ಷಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಬಾರಿ ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ವಿದ್ಯುತ್ ಬಿಲ್ ಹೊರೆಯಿಂದ ಬಚಾವಾಗಲು ಮಂಡಳಿಯಿಂದ ಪ್ರತ್ಯೇಕವಾದ ವಿದ್ಯುತ್ ತಯಾರಿಕಾ ಕಂಪನಿ ಸ್ಥಾಪಿಸಬೇಕು. ಸೋಲಾರ್ ಸೇರಿದಂತೆ ಇತರ ಮೂಲಗಳಿಂದ ಮಂಡಳಿಯು ವಿದ್ಯುತ್ ಉತ್ಪಾದಿಸಿದರೆ ಹಣ ಉಳಿತಾಯವಾಗುತ್ತದೆ. ಬೆಂಗಳೂರಿಗೆ ಸಂಬಂಧಿಸಿರುವ ಎಲ್ಲ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸಬಹುದು. ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಿರುವುದರಿಂದ ಪ್ರತಿ ಯುನಿಟ್ಗೆ 3 ರೂಪಾಯಿ 50 ಪೈಸೆಗೆ ಕರೆಂಟ್ ಸಿಗುತ್ತಿದೆ. ಸೋಲಾರ್ ಯೋಜನೆ ಮಾಡುವಾಗ ನಿಮಗೆ ತಲೆ ಕೆಟ್ಟಿದೆಯಾ ಎಂದು ಹಲವರು ಆಡಿಕೊಂಡಿದ್ದರು ಎಂದರು ಡಿಕೆಶಿ.
ಬಿಡಬ್ಲ್ಯೂಎಸ್ಎಸ್ಬಿ ಖಾಸಗೀಕರಣ ಮಾಡಲ್ಲ!
ನೀರು ಸರಬರಾಜನ್ನು ಖಾಸಗೀಯರಿಗೆ ಕೊಡಬೇಕು ಎಂಬ ಚರ್ಚೆ ಜೆ.ಎಚ್. ಪಟೇಲ್ ಅವರು ಸಿಎಂ ಆಗಿದ್ದಾಗ ಪ್ರಸ್ತಾವನೆ ಬಂದಿತ್ತು. ನಂತರ ಎಸ್.ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗಲೂ ದೊಡ್ಡ ಮಟ್ಟದ ಚರ್ಚೆ ಆಗಿತ್ತು. ನಂತರ ಈಗಲೂ ಬೆಂಗಳೂರು ಜಲಮಂಡಳಿ ನನ್ನ ಬಳಿಯೇ ಇದೆ. ನಾನು ಇರುವವರೆಗೆ ಖಾಸಗಿಯವರಿಗೇ ವಿದ್ಯುತ್ ಸರಬರಾಜು ಮಾಡಲು ಅವಕಾಶ ಕೊಡುವುದಿಲ್ಲ ಎಂದು ಡಿಕೆಶಿ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
—